Saturday, 13 July 2013

ಸುಮ್ಮನೆ ಘಮ್ಮನೆ

ನನ್ನೆದೆಗೊಳದೇ ಘಮ್ಮನೆ ಅರಳಿದ
ಮಲ್ಲಿಗೆಯಾ ನೀನು
ಉಸಿರನು ಹಿಡಿದು ಸುಮ್ಮನೆ ಸಾಯುವೆ
ಒಮ್ಮೆ ನಗುವೆಯೇನು

ಹೇಳೇ ಹುಡುಗಿ ಎದೆಗಳನುಬ್ಬಿಸಿ
'ನೀನೆ ಕಣೋ ನನಗೆ'
ಆತ್ಮಕೆ ನೀನೇ ಹರೆಯಕೆ ನೀನೇ
ನೀನೇ ಕೊನೆವರೆಗೆ

ಹಾರುತ ಬರುವೆ ಅಣಕಿಸಿ ನಗುವೆ
ವೃಥಾ ಮುನಿಸಬೇಡ
ಎಳೆ ಬಿಸಿಲಿನಲಿ ಹೊಳೆಯುವ ನಾವು
ಬಾರೆನೆನ್ನಬೇಡ

ಹೀಗೇ ಇರುವ ತಣ್ಣಗೆ ಸುಳಿವ
ಗಾಳಿಯೊಳಗೆ ಬೆವೆತು
ಹಲ್ಲನು ಕಿರಿದರೆ ಗಲ್ಲವ ಗಿಲ್ಲು
ಹುಸಿಕೋಪವ ಮರೆತು

ಏನೇ ಬಂದರು ಎಂತದೆ ಆದರು
ಸುಮ್ಮನೇನೆ ಇರುವ
ಇಳಿಸಂಜೆಯಲಿ ಮೈಕೈ ಬೆಸೆದು
ಇರುವುದನ್ನೆ ಮರೆವ.

ರಾಶೇಕ್ರ

1 comment:

  1. ಶೀರ್ಷಿಕೆಗೆ 50 ಅಂಕಗಳು ಮತ್ತು ಕವನಕ್ಕೆ ಉಳಿದ 50 ಅಂಕಗಳು.

    ReplyDelete