Wednesday 4 September 2013

ಗಜಲ್ 19

ಯಾರೊ ನಡೆದ ದಾರಿಯಲ್ಲೆ ಯಾಕೆ ನಡೆವೆ ಭ್ರಮೆಯ ತೊರೆಯೊ
ಯಾರೊ ಬರೆದ ಕಾವ್ಯವನ್ನೆ ಯಾಕೆ ಬರೆವೆ ಭ್ರಮೆಯ ತೊರೆಯೊ

ಹೊಸತು ನಡೆಯ ನಡೆಯಬೇಕು ಹಳತು ದಾರಿ ಮರೆಯಬೇಕು
ಯಾಕೆ ಹಳತು ಗಮ್ಯವನ್ನೆ ನೀನು ತೆರೆವೆ ಭ್ರಮೆಯ ತೊರೆಯೊ

ಅವನು ಕೂಡ ಅದನೆ ಬರೆದ ನೀನೆ ಹೊಸತ ಬರೆಯಬೇಕು
ಬರೆದು ಸೋತು ಕೂರಬೇಡ ನೀನೆ ಗೆಲುವೆ ಭ್ರಮೆಯ ತೊರೆಯೊ

ಜಾತಿಯಂತೆ ಧರ್ಮವಂತೆ ಗುಡಿಯಲದಾರೊ ದೇವರಂತೆ
ಬಣ್ಣ ಬಳಿದು ನಟಿಪರೆದುರು ಜೋರು ನಗುವೆ ಭ್ರಮೆಯ ತೊರೆಯೊ

ತುಕ್ಕು ಹಿಡಿದ ತಂತಿಯನ್ನು ಮೀಟಿದರದು ಶೃತಿಯು ಎಲ್ಲಿ
ಬಾಳ ತಂತಿ ನುಡಿಸೊ 'ರಾಜ' ಕೀರ್ತಿ ಪಡೆವೆ ಭ್ರಮೆಯ ತೊರೆಯೊ

No comments:

Post a Comment