ತಲೆ ಬರಹ ಸಿಗಲಿಲ್ಲ
ಅಳಿಸಿ ಹೋದವು ಕನಸುಗಳ ರಾಶಿ
ಕನ್ನಡಿ ಎದುರಿನ ಬಿಂಕ ವೈಯ್ಯಾರ
ಕಿರುಚಾಟವಷ್ಟೇ ಬಾಕಿಯಾಗುಳಿದಿವೆ
ಮುಗಿಲೆತ್ತರಕೆ ಚಿಮ್ಮಿ,
ವ್ಯಾಕುಲಗೊಳ್ಳಲಿಲ್ಲವೇ ಮನ ಗೆಳೆಯ
ಮುತ್ತಿಟ್ಟಿದ್ದ ಬೆಳ್ಳಿ ಮೋಡದ ಮೊಗ
ಬೆಳ್ಳನೆಯ ಕಣ್ಣು, ಕಾಮನಬಿಲ್ಲಿನಂತಿದ್ದ ಹುಬ್ಬು
ವಲ್ಲದಾಯಿತೆ ಈಗ,
ಏನು ಮಾಡಲಿಕ್ಕಿತ್ತು ಹೇಳು
ಬಾಣಲೆಯೊಳಗಿದ್ದ ನಾನು
ಹೊರಬರಲಾಗದ ಅನಿಷ್ಟ ಘಳಿಗೆಯಲಿ
ಇದ್ದುದೊಂದೇ ಹಾದಿ ತುಳಿದುದು ತಪ್ಪಾದರೆ
ಸತ್ತೇ ಹೋಗುವೆನೆಂದ ನಿನ್ನ ಆ ವಿಕಾರ
ಕಾಣಲೇ ಇಲ್ಲ ನನಗೆ
ಈ ಬೆಳ್ಳಿ ಮೃದು ಗಲ್ಲಗಳಿಗೆ
ಆ ದರಿದ್ರ ಚಿಮ್ಮಿಸುವಾ ಮೊದಲೆ
ಬೇಯಿಸಿದೆಯಲ್ಲಾ ಮುಖವ
ಇನ್ನೆಲ್ಲಾದರೂ ಸಿಕ್ಕರೆ
ಓರೆಗಣ್ಣಿನಲಿ ನೋಡಬೇಡವೆಂದೇ?
ನಿನ್ನನೊಪ್ಪದವಳಿನ್ನಾರಿಗೊಪ್ಪಬಾರದೆಂದೇ?,
ನೀನ್ಯಾವ ತ್ಯಾಗಿ ಛೀ ತೆಗಿ
ಎದುರಾಗದಿರು ನಾನೂ ನಿಲ್ಲೆ,
ವಿಕಾರವಿಟ್ಟುಕೊಂಡು ನಿನ್ನೆದುರು
ಹೋಗಲಿ ಬಿಡು ಹತವಾಗುವೆ, ಚೆನ್ನಾಗಿರು
ಹೆಣ್ಮನದ ಎದೆಗೊಳಗಳ ಅರಿಯದಿರು.
.........ರಾಶೇಕ್ರ
No comments:
Post a Comment