Wednesday, 17 July 2013

ನನ್ನ ನಾದ

ನನ್ನ ನಾದ

ಬಟ್ಟಲು ಬಾನಡಿ ಹೊಸೆದಾ ಕನಸಿಗೆ
ಖಾತರಿ ಎಲ್ಲಿದೆಯೋ
ಬಣ್ಣದ ಕನಸನು ಕಂಡೊಡೆ ಇರುಳಲಿ
ಘಮ್ ಘಮ್ಮೆನ್ನುವುದೋ

ಹಳೆ ಡಾಂಬರಿನ ಕರಿಬಣ್ಣದಲಿ
ನೆನಪಿನ ಹೊಂಡವಿದೆ
ಎಡವುತ ಧೊಪ್ಪನೆ ಕಾಲ್ಜಾರಿದರೆ
ನೋವದು ಮಾಸುವುದೆ

ಕತ್ತಲೆಯೊಳಗೆ ಬೆತ್ತಲು ಹುಡುಕುವ
ಪುಕ್ಕಲು ನಾನಿಲ್ಲಿ
ಇಕ್ಕೆಲಗಳಲಿ ಫಕ್ಕನೆ ಸಿಕ್ಕುವ
ಬೆಳಕಿಗೆ ನೆಲೆಯೆಲ್ಲಿ

ಎತ್ತಣ ನೀನೋ ಎತ್ತಣ ನಾನೋ
ಲೆಕ್ಕಕೆ ಸಿಕ್ಕದಿದು
ಎಣ್ಣೆಯ ಹೊಯ್ದು ದೀಪವ ಉರಿಸುವೆ
ತಳಕೇ ಬೆಳಕಿರದು

ಅವಳಾ ಕಣ್ಣೊಳು ಕನಸನು ಕೆತ್ತಲು
ನನ್ನನೆ ಒಪ್ಪಿಬಿಡಿ
ಕೆತ್ತುತ ಕೆತ್ತುತ ಸತ್ತೇ ಹೋದರು
ಸಮ್ಮನೆ ಇದ್ದುಬಿಡಿ

ಗೆಜ್ಜೆಯ ಕಟ್ಟಿ ಕುಣಿಯುವ ಆಸೆ
ಅವಳು ಒಲಿದ ದಿನ
ಕುಣಿದೇ ಕುಣಿವೆ ಸದ್ದನು ಮಾಡಿ
ಧೀಂತ ಧೀಂತ ಧಿರನ

ರಾಶೇಕ್ರ

No comments:

Post a Comment