Tuesday 23 July 2013

ಅನಂತ ಚೇತನ

ಪಿ. ಲಂಕೇಶರ 'ಪಾಪದ ಹೂವುಗಳು'
"ಚಾರ್ಲ್ಸ್ ಬೋದಿಲೇರ್" ಓದುವಾಗ, ನಾನು.....

"ಅನಂತ ಚೇತನ"

ಆತ ಚೇತನ, ಮೂಲತಃ ಗ್ರಾಮೀಣ ಪ್ರದೇಶದಿಂದ ಬಂದಂಥವನು, ಕೊನೆಗಾಲದಲ್ಲೂ ಅಲ್ಲಿಯೇ ನೆಲೆಸಿದ್ದ, ತನ್ನ ನಾಲ್ಕನೇ ತರಗತಿಯ ವಿಧ್ಯಾಭ್ಯಾಸದಲ್ಲಿ ಅಂದರೆ ಸುಮಾರು ಹತ್ತರ ಪ್ರಾಯದವನಿದ್ದಾಗ ತನ್ನ ಶಿಕ್ಷಕರನ್ನೇ ಪ್ರಶ್ನಿಸಲು ಶುರುವಿಟ್ಟುಕೊಂಡ, ಆತನ ಒಂದೊಂದು ಪ್ರಶ್ನೆಯೂ ಅವರನ್ನು ವಿಚಲಿತಗೊಳಿಸುತ್ತಿತ್ತು, ಕೇವಲ ಪುಸ್ತಕವನ್ನೇ ಓದಿಸುವ ನೀವು ನೀಚರೆಂದುಬಿಟ್ಟಿದ್ದ, ಇತಿಹಾಸವನ್ನೇ ಮರುಕಳಿಸಿತ್ತಿದ್ದೀರೆ ಹೊರತು ಭವಿಷ್ಯವನ್ನು ಕಟ್ಟಿಕೊಡುತ್ತಿಲ್ಲವೆಂದ, ದಂಗಾದ ಶಿಕ್ಷಕರು ಸ್ವಲ್ಪವೂ ಯೋಚಿಸದೆ ಹೊರಗೆ ತಳ್ಳಿದರು ಆಗವನಿಗೆ ಹದಿನಾರು.
ಹೀಗೆ ಸಮಾಜಕ್ಕೆ ಹೊಳೆವ ಅಥವಾ ಕೆಟ್ಟದಾಗಿ ಕಾಣಿಸಿಕೊಂಡ ಇವನ ತಂದೆಗೆ ಇಬ್ಬರು ಸಹೋದರರು, ಅದರಲ್ಲೊಬ್ಬ ಮಾನಸಿಕ ಅಸ್ವಸ್ಥನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ, ಮತ್ತೊಬ್ಬ ಸದಾ ಅಮಲಿನಲ್ಲೇ ತೇಲುತ್ತಾ ಹುಚ್ಚನಾಗಿ ಅಲೆಯುತ್ತಿದ್ದ, ನೆಟ್ಟಗಿದ್ದದ್ದು ಅವನ ಅಪ್ಪ ಮಾತ್ರ.
ಇಬ್ಬರು ಸಹೋದರರೊಂದಿಗೆ ಬೆಳೆದ ಚೇತನ ನಿಂದನೆಗೆ ಒಳಪಡುತ್ತಲೇ ಇದ್ದ, ತನ್ನ ಒಳಗಿನ ಬೆಳಕನ್ನು ಎಲ್ಲಿಯೂ ತೋರ್ಗೊಡದ ಈತ ಕಾಲಕ್ರಮೇಣ ಹರೆಯಕ್ಕೆ ಬರುತ್ತಿದ್ದಂತೇ ಮಾಮೂಲಿಯಂತೆ ಹೆಣ್ಣುಗಳ ಸೆಳೆತಕ್ಕೆ ಒಳಗಾದ, ಪ್ರೀತಿಯಲಿ ಬೀಳುತ್ತಿದ್ದ ಈತನ ಪ್ರೇಮಕಥೆಗಳು ಅಷ್ಟೇನೂ ಸ್ವಾರಸ್ಯವಿಲ್ಲದಿದ್ದರೂ ಚೇತನನ ಪ್ರೇಮ ಪವಿತ್ರವಾದದ್ದು ಮತ್ತು ಜನಗಳ ಕಣ್ಣಿಗೆ ಹುಚ್ಚುತನವೆಂಬಂತೆ ಗೋಚರಿಸುತ್ತಿತ್ತು.
ಚೇತನ ಯಾವುದೇ ಹೆಣ್ಣನಾಗಲಿ ಮುಖ್ಯವಾಗಿ ಇನ್ನೂ ಮೈನೆರೆಯದವರನ್ನೇ ತನ್ನ ಪ್ರೇಮದ ಪಕ್ಷಿಗಳನ್ನಾಗಿಸಿಕೊಳ್ಳುತ್ತಿದ್ದ, ಯಾರನ್ನೂ ತೀರ ಹತ್ತಿರದಿಂದ ಇಲ್ಲವೇ ನೇರಗಣ್ಣಿನಿಂದ ನೋಡಿದವನಲ್ಲ, ಸೌಮ್ಯ ಸ್ವಭಾವದನಾಗಿದ್ದ ಚೇತನ ಈ ಸಾಲಿನ ಯಾವ ಹೆಣ್ಣನ್ನೂ ಮಾತನಾಡಿಸಿಲ್ಲ ಸಹ.
ಹೀಗೆ ಒಳಗೇ ಪ್ರೀತಿಸುತ್ತಿದ್ದ ಇವನ ನಡತೆಗಳು ಸಾಮಾನ್ಯರ ಕಣ್ಣಿಗೆ ಅನುಮಾನಾಸ್ಪದವಾಗಿ ಕಾಣುತಿದ್ದುದರಲ್ಲಿ ಯಾವುದೇ ಆಶ್ಚರ್ಯವಿರಲಿಲ್ಲ.
ಹಲವು ಪ್ರೇಮ ವೈಫಲ್ಯಗಳ ನಂತರ ನೋವನ್ನು ಹೊರಗೆಡವಲು ಬರಹದ ಹಾದಿಹಿಡಿದ. ತೊದಲಾಗಿ ಬರೆಯುತಿದ್ದ ಇವನ ಬರಹಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅನಂತ ಈತನಿಗೆ ಸಲಹೆ ಸೂಚನೆಗಳನ್ನು ಕೊಡುತ್ತ ಬೆಳಕಿಗೆ ತರುವಲ್ಲಿ ಸತತ ಪ್ರಯತ್ನಿಸಿದ ಮತ್ತು ತಂದ ಸಹ.ಅನಂತನಿಗೆ ಸಂತಸದ ದಿನಗಳವು.

ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಚೇತನನ ಊರಿನವರು ಇವನನ್ನು ಭೇಟಿಯಾದಾಗಲೆಲ್ಲ ನಿನ್ನ ಚಿಕ್ಕಪ್ಪಂದಿರಂತೆ ಆಗಿಬಿಡುತ್ತೀ ಎಂದೇ ಹೇಳುತ್ತಿದ್ದರು. ಅದು ಅವನೊಳಗೆ ಆಳವಾಗಿ ಗಾಯಮಾಡಲು ಶುರುವಿಟ್ಟುಕೊಂಡಿತ್ತು, ಕ್ರಮೇಣ ಪುಸ್ತಕಗಳನ್ನು ಓದುವ ಗೀಳು ಹತ್ತಿಸಿಕೊಂಡ ಚೇತನ ಕೆಲವು ಪರಿಣಾಮಕಾರಿ ಪುಸ್ತಕಗಳನ್ನು ಗಹನವಾಗಿ ಓದುತ್ತಾ ಪಾತ್ರವಾಗಿಬಿಡುತ್ತಿದ್ದ.
ಹೀಗೇ ಪಾತ್ರವಾಗುತ್ತಿದ್ದವನ ಕೈಗೆ ಅಚಾನಕ್ಕಾಗಿ ಸಿಕ್ಕ ಪುಸ್ತಕ ಬೋದಿಲೇರ್ ಆತ್ಮ ಚರಿತ್ರೆ.
ಬೋದಿಲೇರ್ ಒಬ್ಬ ಶ್ರೀಮಂತನ ಮಗನಾಗಿ ಕಾಲಕ್ರಮೇಣ ಅವರಿಂದ ತಿರಸ್ಕಾರಕ್ಕೊಳಗಾಗಿ ಕಸದಂತಾಗಿಬಿಟ್ಟಿರುತ್ತಾನೆ, ಏತನ್ಮಧ್ಯೆ ಆತನ ಪ್ರೇಯಸಿ ಜೀನ್'ಳ ಕುರಿತು ವೇಶ್ಯೆಯರ ಕುರಿತು ಸಮಾಜದ ಪಿಡುಗುಗಳು ಮತ್ತು ಹತ್ತು ದಶಕಗಳಾಚೆಗಿನ ಭವಿಷ್ಯವನ್ನೇ ತನ್ನ ಕವನಗಳಲ್ಲಿ ಇಳಿಸಿ ಆಗಿನ ಸರ್ಕಾರದಿಂದ(1857)ಜೈಲು ಶಿಕ್ಷೆಯನ್ನೇ ಅನುಭವಿಸುತ್ತಾನೆ, ಕಾಸಿಗೆಂದು ಪ್ರಕಟಿಸಿದ ಅವನ ಕವನ ಸಂಕಲನಕ್ಕೆ ಆತನೇ ದಂಡ ತೆರುವಂತಾಗಿಬಿಡುತ್ತದೆ, ಹೀಗೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುವ ಬೋದಿಲೇರನ ಚರಿತ್ರೆಯನ್ನು ಓದುವಾಗ ಚೇತನ ಕೂಡ ಬೋದಿಲೇರನಾಗುತ್ತಾನೆ ಮತ್ತು ಅವನಂತೆಯೇ ಆಗಿಬಿಡಬೇಕೆಂಬ ಸಣ್ಣದೊಂದು ಆಸೆ ಅವನಲ್ಲಿ ಬೆಳೆಯಲು ಶುರುವಿಟ್ಟುಕೊಂಡು, ಕಾಲಾನಂತರ ಚೇತನ ತನ್ನ ಕವಿತೆಗಳಲ್ಲಿ ಒಂದು ಅಧ್ಬುತ ಶಕ್ತಿಯನ್ನು ಅಗೋಚರ ಗೋಚರಗಳನ್ನು ಕಟ್ಟುತ್ತಾ ಹಾಳು ಸಮಾಜವನ್ನು ತಾನೇ ಎಂಬಂತೆ ತಿಳಿದುಬಿಡುತ್ತಾನೆ, ವಿಕಾರವಾಗಿ ತನ್ನ ನಡೆಗಳನ್ನು ಬದಲಾಯಿಸಿಕೊಳ್ಳುತ್ತಾನೆ, ಹೀಗೇ ತಾನು ಹುಚ್ಚನೆಂದು ಹೇಳಿಕೊಳ್ಳುತ್ತಾ ಕವನಗಳನ್ನು ಬರೆಯುತ್ತಾ ಹುಚ್ಚನೇ ಆಗಿಬಿಡುತ್ತಾನೆ, ದೊಡ್ಡದೊಂದು ಪುಸ್ತಕವಾಗುತ್ತಾನೆ, ಚೇತನ ಒಂದೊಳ್ಳೆ ಪುಸ್ತಕವಾಗುವ ಮೂಲಕ ನನ್ನಂಥವರ ಹುಚ್ಚಿಗೂ ಕಾರಣವಾಗಿಬಿಡುತ್ತಾನೆ.

ರಾಶೇಕ್ರ

No comments:

Post a Comment