Thursday, 23 May 2013

ಅಳಲು

ಅಳಲು

ಕಳೆದುಕೊಂಡಿದ್ದೇನೆ ಗೆಳೆಯ ಎಲ್ಲವನ್ನೂ
ಹೀಗೆ ಬರಿದಾಗಿ ನಿಂತಿದ್ದೇನೆ ನಿನ್ನೆದುರು
ಕಪಾಲಗಲ ಮೇಲೆ ಬಡಿದು ಬೇಕಿದ್ದರೆ ನೋಡು
ಒದ್ದೆಗಣ್ಣಿಲ್ಲ ಒರೆಸಿಕೊಂಡಿದ್ದೇನೆ
ಹುಚ್ಚಿ ಅಂತಂದರೂ ಸರಿಯೆ
ಅದೇ ಸರಿಯೆಂಬ ಸುಳ್ಳು ಸಾರುತ್ತೇನೆ,
ಒಳಗೇ ನಾರುತ್ತೇನೆ

ಅಪ್ಪಿ ಹಿಡಿ ನನ್ನ ನೀ ಉಸಿರಿಗಟ್ಟದಂತೆ
ತೋಳ್ಬಲವದೋರಿ ಹುಸಿ ನಗಬೇಡ
ಗಟ್ಟಿಗಿತ್ತಿ ನಿನಗಿಂತಲೂ ನಾ
ತುಳಿದು ನಿಂತಿರುವೆ ಸಾವಿರ ನೋವುಗಳ

ನಂಬಿದ್ದೇನೆ ನಂಬಿದವರೆಲ್ಲರ
ನಂಬಿಕೆಗಳ ಹುಸಿಗೊಳಿಸಿ
ತಬ್ಬಿಬಿಡು ಕೇರಿಯ ಜನ ಮೂದಲಿಸುವಾಗ
ಬೇಕೆಂದರೇಳು ಥಕಥಕನೆ ಕುಣಿವೆ
ಮಯ್ ನವಿರೇಳಿಸಿಕೊಳುವಿಯಂತೆ

ಮಿಂದೇಳುವೆ ಹಾಗೆ ಮಲಗುವೆ
ನಿನ್ನೆದೆ ರೋಮಗಳ ಬೆವರುಗಳ
ಒಗ್ಗದಿದ್ದರೂ ಘಮಿಸಿ
ಅನುಮಾನಿಸದಂತೆ ಮತ್ತೆ ಮತ್ತೆ ರಮಿಸಿ

ರಚ್ಚೆ ಹಿಡಿದರೆ ನಿನ್ನ ಮಗ ನನ್ನ ಮಗಳು
ಅಲ್ಲಲ್ಲ ನನ್ನ ಮಕ್ಕಳು ನಗಿಸುತ್ತೇನೆ
ರಕ್ತವನ್ನಾದರೂ ಹಿಂಡಿ
ಮೊಲೆ ಚಪ್ಪರಿಸುವ ತುಟಿಗಳಿಗೆ

ಬೆಚ್ಚಿಬಿದ್ದರೆ ಸಿಡಿಲಿಗೋ ಕೂಗಿಗೋ
ಕಣ್ಣರಳಿಸಿಬಿಡು ಜೋರಾಗಿ ನಗುತಳುವೆ
ರಾತ್ರಿಗನಸಿನಲಿ ಅವ್ವ ನಕ್ಕರೆ
ಒಂದೇ ಹಗಲು ಅಲ್ಲಿ ಕಳೆದು
ತಿರುಗಿ ಬರುವೆ ಅದೇ ಬಿರುಸಿನಲಿ
ಬರುವಾಗ ನೀ ತಂದದ್ದೇನು ಅನಬೇಡ

.........ರಾಶೇಕ್ರ

No comments:

Post a Comment