Monday, 3 June 2013

ಮೇಲೇಳದ ಸತ್ಯ

ಮೇಲೇಳದ ಸತ್ಯ

ಎಳೆಎಳೆಯಾಗಿ ತೆರೆದುಕೊಳ್ಳುತಿದೆ
ಗೋಡೆ ಬೆಳಕಿನ ಅಲ್ಲಾಹುವಿನಲಿ
ಶಿಲೆಯ ದೇವರ ತೆರೆದೆದೆಗಳಲಿ
ಕ್ರಿಸ್ತನ ಕಾಲದಲ್ಲೇ ಸಿಕ್ಕ ನಾಕಿಂಚಿನ ಮೊಳೆಗಳಲಿ

ಜಾನಪದಗಳಲಿ ಬೀದಿ ದೀಪಗಳಲಿ
ಮೆರೆವ ಮನಗಳಲಿ ಹೊಳೆವ ಮಣ್ಣಿನಲಿ
ಭಕುತಿ ಭಾವಗಳಲಿ ಮೈಯ್ಯ ಬಣ್ಣಗಳಲಿ

ಚಾಚುತಿದೆ ತೋಳು ಎಳೆದುಕೊಂಡು ಬಳಿದುಕೊಂಡು
ಗವ್ವೆನ್ನುವ ಕತ್ತಲಿನ ಗೋರಿ ಫಲನದಲಿ ಗುಮ್ಮನೆ
ತನ್ನ ತಾನೆ ಹಳಿದುಕೊಂಡು ನನ್ನನೂ ಕರೆದುಕೊಂಡು
ತಬ್ಬಿಕೊಂಡು ಸತ್ಯ ತನ್ನ ತಾನು ಸುಳ್ಳೆಂದುಕೊಂಡು

ಏಳುತ್ತದೆ ಕೊಡವಿಕೊಂಡು ಕೆಮ್ಮಣ್ಣು ಗುಂಡಿಯಿಂದ
ಲಾಟುಗಟ್ಟಲೇ ಮಣ್ಣ ಮುಚ್ಚಿದರೂ
ಬಿಡುತ್ತದೆ ಹಲ್ಲು ಅಮಾಯಕನ ಎದುರು
ಕೈ ಚೆಲ್ಲಿ ಕೂರುತ್ತದೆ ಸಿರಿವಂತನಿಗೀಗ ಇನ್ನಿಲ್ಲದ ಖದರ್ರು

ಅದೋ ಕಂಡಿದೆ ಅಲ್ಲಿ ನಿತ್ಯ ಸತ್ಯದ ಬೆಳಕು
ಆ ದಿಗಂತದಲಿ ಬೇಲಿ ಹೂವಿನಲಿ
ಕನಸು ಕಂಡವರೆದೆಗಳಲಿ
ಅವಿತಿದೆ ಕರಿಯ ಕಂಬಳಿ ಹೊದ್ದು
ಎಚ್ಚೆತ್ತುಕೊಳ್ಳಲು ಮತ್ತೆ ಮಂಪರು
ಮುಸಿಮುಸಿ ನಗುತ್ತಾರಿದ ಕಂಡ ಗಾಂಪರರು.

...........ರಾಶೇಕ್ರ

No comments:

Post a Comment