Tuesday, 18 June 2013

ಅ(ನ್ನ)ವ್ವ

ಅ(ನ್ನ)ವ್ವ

ಮೊನ್ನೆ ಮೊನ್ನೆಯಷ್ಟೇ ಜೊತೆಯಾದ ಗೆಳೆಯರೊಂದಿಗೆ ಪಡಸಾಲೆಯಲಿ ಕೂತು, ಹರಟಿ ಕರುಳು ಚುರ್ರೆಂದಾಗ ಮನೆಗೆ ವಾಪಸ್ಸಾಗುತ್ತೇನೆ,
ಅವ್ವ ಟೀ ವಿ ಮುಂದೆ ಕೂತು ಮಿಕ್ಕಿದ್ದ ತಂಗುಳನ್ನಕ್ಕೆ ಮೊಸರು ಕಲಸಿ ತಿನ್ನುತ್ತಿದ್ದಾಳೆ, ಬಿರುಸಿನಲಿ ಒಳಬಂದ ನಾನು ಅನ್ನ ಎನ್ನುತ್ತೇನೆ, ಅವಳಿನ್ನೇನು ಬಾಯಿಗಿಡಬೇಕಿದ್ದ ತುತ್ತು ಗೊಂದಲಕ್ಕಳಗಾಗುತ್ತದೆ, ಬಾಯಿ ಸೇರುವುದೋ ಜಾರಿ ಮೆತ್ತಗೆ ಕೆಳಗೆ ಬೀಳುವುದೋ?
ಅವ್ವ ಎದ್ದು ಅರ್ಧಕ್ಕೆ ನಿಲ್ಲಿಸಿ ಕೋಣೆಗೋಡುತ್ತಾಳೆ, ಬಿಸಿ ಅನ್ನ ಸಾರು ತಂದು ನನ್ನೆದುರಿಡುತ್ತಾಳೆ, 'ಮೊಸರು' ಎನ್ನುತ್ತೇನೆ ಆಗ ನನ್ನೊಳಗೆರಡು ಭಾವ, ಒಂದು  ಮೊಸರು ಬೇಕು ಎರಡನೆಯದು  ನನಗೆ ಉಳಿಸಿದ್ದೀರೋ ಇಲ್ಲ ಎಲ್ಲವನ್ನೂ ನೀವೇ ತಿಂದು ಮುಗಿಸಿದ್ದೀರೋ? ಅವ್ವ ಜಾಣೆ ಮಿಗಿಸಿದ್ದಾಳೆ, ನೀರು ಎನ್ನುತ್ತೇನೆ ಮತ್ತೆ ಓಡುತ್ತಾಳೆ ತಂದಿಡುತ್ತಾಳೆ, ತಂದು ನಿರಾಳವಾದಂತೆ ಅವಳ ತಟ್ಟೆ ಕೈಗೆತ್ತಿಕೊಂಡು ಮುಂಗೈ ಬಾಯಿಯತ್ತ ಅವಸವಸರವಾಗಿ ಓಡುತ್ತದೆ,ಅಷ್ಟರಲ್ಲೇ,
ನಾನು ತಟ್ಟೆಯನ್ನು ತೂದಿ ಎಸೆಯುತ್ತೇನೆ ಸಗಣಿ ನೆಲದ ಮೇಲೆ, ಅನ್ನ ಸಾರು ಮೊಸರು ಮಿಶ್ರಗೊಂಡ ಊಟ ತನ್ನ ತಾಯಿ ನೆಲದ ಮೇಲೆ ಚಿತ್ತಾರ ಬಿಡಿಸಿಕೊಂಡಿರುತ್ತದೆ ಕೆಟ್ಟದಾಗಿ,
ಒಳಗೇ ಬೇಯುತ್ತಾಳೆ ಅವ್ವ ಒಪ್ಪೊರಲಿನಲ್ಲಿರುವ ಮಿಕ್ಕ ಮೂಟೆಗಳ ಲೆಕ್ಕ ಹಾಕಿ, ಉಕ್ಕಿ ಬಂದ ಕೋಪವನ್ನೆಲ್ಲ ತಡೆದು ತಣ್ಣಗಾಗುತ್ತಾಳೆ,
ಬೇರೆ ಮಾಡಿಕೊಡಲೇ, ಪಕ್ಕದ ಮನೆಯಲ್ಲಿ ಸಾರು ತಂದುಕೊಡಲೇ ಎಂದೆಲ್ಲ ಒಂದಿಷ್ಟು ಆಯ್ಕೆಗಳನಿಕ್ಕುತ್ತಾಳೆ ನನ್ನೆದುರು, ನಾನು ಚನ್ನಾಗಿ ಬೈದು ಹೊರಗೋಡುತ್ತೇನೆ,  ಮರಳಿ ಗೆಳೆಯರ ಸೇರಿ ಪುಸಲಾಯಿಸಿ ಮಾಂಸದೂಟದ ಜೊತೆಗೆ ಎಣ್ಣೆಯನ್ನೂ ಗೆಲ್ಲುತ್ತೇನೆ,
ನನ್ನವ್ವ ಮಿಕ್ಕಿದ್ದ ತಂಗುಳನ್ನಕ್ಕೆ ಕೈ ತೊಳೆದು, ಅಲ್ಲೇ ಎರಚಾಡಿದ್ದ ನನ್ನ ಪಾಲಿನ ಬಿಸಿಯನ್ನ ಬಾಚಿ ಬಚ್ಚಲಿಗುಯ್ಯುತ್ತಾಳೆ,

.......ರಾಶೇಕ್ರ

No comments:

Post a Comment