Monday, 3 June 2013

ಕಾಲ

ಕಾಲ

ನಡೆದಿದ್ದೇನೆ ಶತ ಶತಮಾನಗಳಿಂದ
ದಾರಿಯಲಿ ಕವಲು ಸಿಕ್ಕೀತೆಂದು
ಕಾದಿದ್ದೇನೆ ಬರಿಗಾಲ ನಡಿಗೆಗೆ
ಎಕ್ಕಡ ಸಿಕ್ಕೀತೆಂದು,

ನಡೆ ನಡೆದಿದ್ದೇ ನಡೆದಿದ್ದು
ಬಳಲಿದ್ದು ತೊಳಲಿದ್ದು ಅತ್ತಿದ್ದು
ಇತಿಹಾಸವಗಲೆಂದು,
ಸೋತು ಕೆಲವೆಡೆ ಉರುಳಿದ್ದೇನೆ
ಸಾಂತ್ವನ ಸಿಕ್ಕೀತೆಂದು ಬೇಡಿದ್ದೇನೆ,

ಗಡಿಯಾರದ ಮುಳ್ಳಲ್ಲ ನಾನು
ನಡೆದಲ್ಲೇ ನಡೆಯಲು
ನೇರ ನಡೆ ನನ್ನದು ಅಡ್ಡ ಮಾತಿಲ್ಲ
ಅಡ್ಢಡ್ಡ ಉದ್ದುದ್ದ ಬಿದ್ದವರ ನೆಗೆದು
ಪಾಪ ಅಂಟೀತೆಂದು ಅಲ್ಲಲ್ಲಿ ಮಿಂದು,

ಅದೆಷ್ಟೋ ಸತ್ಯಗಳ ಗೋರಿಗಳು
ದಾರಿ ನಡುವಲ್ಲೇ ಇವೆ
ಗಹಗಹಿಸಿ ನಗುತ್ತಾ
ಸುಳ್ಳುಗಳವಕೆ ಕಾವಲಿವೆ

ಒಮ್ಮೆ ನೆರಳು ಒಮ್ಮೆ ಬಿಸಿಲು
ದಿನದ ರವಿ ಶಶಿಯರು
ಬಿಟ್ಟರೂನು ಬಿಡರು

ಪಸರಿಸುತವೆ ಹೂಗಳು
ಬಿರಿದುಕೊಂಡು ತೆರೆದುಕೊಂಡು
ದಳ ದಳಗಳ ಕಳೆದುಕೊಂಡು
ಬಂಧಗಳನೆಲ್ಲ ಬದಿಗೊತ್ತಿ
ಸೂಸುತ್ತವೆ ಸುಗಂಧ
ಬೀಸುವ ಗಾಳಿಗನುವು ಮಾಡಿಕೊಂಡು

ಎಲ್ಲ ಗೆಲ್ಲುವಾ ತವಕ
ಅರ್ಧ ದಾರಿಗೆ ನಡುಕ
ಸುಮ್ಮನಲ್ಲ ಈ ನಡಿಗೆ, ಗಮ್ಯದೆಡೆಗೆ
ಇರದ ಕಾರಣಕಾಗಿ ಆ ಅನಂತ ದಿಕ್ಕಿನೆಡೆಗೆ

.........ರಾಶೇಕ್ರ

No comments:

Post a Comment