ಬರೆಯಲೇಕೆ ನಾ ನಿನ್ನನೇ ಖಾಲೀ ನಿನ್ನನೇ
ಕಾರ್ನರ್ ಮೇಲಿನ ಮೆಲು ನಡಿಗೆಯನ್ನೇ
ಮೃದು ಅಂಗೈಯೊಳಗಿನ ಮುಳ್ಳನೇ
ತಳ್ಳುಗಾಡಿಯ ನೆನಪನೇ
ಮೈಕು ಉಸುರಿದ ಹಾಡಿನೊಳು ನಮ್ಮನೇ,
ಒಡೆದ ಮಡಕೆಯಿದೆ ಬಟ್ಟಲಿನಂತದು
ತುಂಬಿಸಿಕೊಳ್ಳಲಿಕ್ಕದೇನನ್ನೋ
ತೂತು ಸೂರಿದೆ ಚೆಲ್ಲಿಬಿಡಲು
ಅಗಾಧ ಆಗಸದ ನೀರನೇ ಹನಿಹನಿಗಳನೇ,
ಇದ್ದಾರೆ ಹೆತ್ತವರು ಸತ್ತವರು
ನಿನ್ನಂತೆಯೇ ಒಂದಷ್ಟು ಬಿತ್ತಿ ಹೋದವರು
ಗುರಿಯಿದೆ ತಿರುವಿದೆ ಕವಲಿದೆ
ದಾರಿಯೂ ಇದೆ ಅಲ್ಲೆಲ್ಲೋ ಗಮ್ಯವೂ,
ಖಾಲಿ ಕವರೊಂದು ತೇಲಿಬಂದು ಗಿಡಕ್ಕಂಟಿದೆ
ನಾ ಕಿತ್ತೆಸೆವಾಗ ಸ್ವಲ್ಪ ಹರಿದಿದ್ದಿದೆ
ಅದನ್ನೂ ಬರೆವುದಿದೆ,
ಸುಖಾ ಸುಮ್ಮನೇ ನಗುವುದಿದೆ,
ಬರೆವುದಿದೆ ಬಂದದ್ದನ್ನು ಬಾರದಿದ್ದನ್ನು
ಫಳ್ಳನೆ ಹೊಳೆದು ಮರೆಯಾದುದರ ಬೆನ್ನಟ್ಟಿ
ಇನ್ನೇನನ್ನೋ ದಕ್ಕಿಸಿಕೊಂಡು
ಬೀಗುವುದಿದೆ ಬೆವರ ವಾಸನೆ ಮರೆತು,
ಹೊಂಗೆ ಮರದ ಅಂಡೆ ಕೂತು
ಎದೆ ಹಿಡಿದು ಮಲಗಬೇಕಿದೆ
ಎಲ್ಲವನ್ನೂ ಬರೆದ ಮೇಲೆ
ಸಂಪೂರ್ಣ.
.......ರಾಶೇಕ್ರ
ನನ್ನ ಮನಸ್ಸಿನಲ್ಲೂ ಹೀಗೆ ಭಾವನೆಗಳು ಆಗಾಗ ಸಾಂಧ್ರವಾಗುತ್ತವೆ ಗೆಳೆಯ,
ReplyDeleteಹೊಂಗೆ ಮರದ ಅಂಡೆ ಕೂತು
ಎದೆ ಹಿಡಿದು ಮಲಗಬೇಕಿದೆ
ಎಲ್ಲವನ್ನೂ ಬರೆದ ಮೇಲೆ
ಸಂಪೂರ್ಣ.
ಯಾಕೋ ತುಂಬಾ ತಟ್ಟಿದ ಕವನ.
nice... totally lost feel and at the corner of mind light hopes..ur poem touched my heart.
ReplyDelete