Monday, 3 June 2013

ಹಾಗೆ ಸುಮ್ಮನೆ

ಮಗ ಅಪ್ಪನ ಕತ್ತು ಕುಯ್ಯುತ್ತಿದ್ದ,
ನಾನು ಪೆನ್ನಿಗೆ ಇಂಕು ತುಂಬುತ್ತಿದ್ದೆ.

ಜಿಟಿಜಿಟಿ ಮಳೆಯಲಿ ಒದ್ದೆಯಾದವಳ ಅಪ್ಪುವಾಗದೇನೋ ಸಡಗರ, ಬಿಸಿ ಬಿಸಿ ಬಜ್ಜಿ ಮೆದ್ದಂತೆ,
ಕೊರೆವ ಚಳಿಗೆ ಥರಥರ ನಡುಗಿ ಹೊದಿಕೆಯಾಗುತ್ತಾಳೆ, ಕಳಚಿಕೊಂಡು ಹೊದಿಕೆಯ ಜೊತೆಗೆ ಲಜ್ಜೆ ಗೆಜ್ಜೆಗಳ,
ಬೇಸಿಗೆಗೆ ಬೇಯುತ್ತಾಳೆ ಅಂಟಿಕೊಳ್ಳಲೋದರೆ,
ಥೂ ವಾಸನೆ ಮಡಿಯಾಗಿರೆಂದು.


ಬಿಸಿಲಿಗಡ್ಡವಾಗಿ ಸೆಟೆದುಕೊಂಡಿದ್ದ ತೆಂಗಿನ ಮರದ ಕೆಳಗೆ ಸತ್ತಂತೆ ಬಿದ್ದಿದ್ದ ನನ್ನ ಕೆಂಜಗವೊಂದು ಕಚ್ಚಿ ನನ್ನುರಿಗೆ ಕೊಲೆಯಾಯ್ತು,
ಧೊಪ್ಪೆಂದು ಬಿದ್ದ ಕಾಯಿ ಪಕ್ಕಕ್ಕೆ ಉರುಳಿ ಕೈಕೈ ಹಿಚುಕುತ್ತಿತ್ತು.


ಅಷ್ಟೋ ಇಷ್ಟೋ ಹಣಮಾಡಿ
ಬಾಡಿಗೆ ಮನೆಯಲ್ಲಿ
ಉಳಿದುಕೊಂಡಿದ್ದ ಜ್ಯೋತಿಷಿಯ ಕಣ್ಣು
ಪಕ್ಕದ ಸೈಟಿನ ಅಡಿಪಾಯಕ್ಕೆಂದು ಅಳತೆ ಮಾಡಿ
ನೆಟ್ಟಿದ್ದ ಅಂಕಾಲೆ ಗೂಟದ ಮೇಲಿತ್ತು.


   ಮಾಡಿಟ್ಟದ್ದನ್ನೆಲ್ಲ
ಕೂಡಿಡುತ್ತಲೇ ಬೆಳೆದ
ಜಿಪುಣನೊಬ್ಬ
ತನ್ನ ಫ್ಲಾಟೆದೆಯ ಎಲುಬುಗಳನ್ನಷ್ಟೇ
ಪ್ರದರ್ಶನಕ್ಕಿಟ್ಟಿದ್ದ:-)



ಕಡಲೇಕಾಯಿ ಗಣಿತದಲ್ಲಿ ಶೂನ್ಯ ಸಂಪಾದಿಸಿದ್ದ ಗಡ್ಡದ ಹುಡುಗ,
ಆರ್ಯಭಟನ ಪ್ರತಿನಿಧಿಸುವಂತಿದ್ದ.


 ಅರಳಿ ನಿಂತ ಹರೆಯದ ಹುಢುಗಿಗೆ
ಫ್ರೆಂಚು ಗಡ್ಡದವನ ದಪ್ಪ ಪರ್ಸೂ ಗ್ಉಣ,
ಪ್ಯಾರಾಗಾನು ಹವಾಯಿಯ ಹರಿದ ಪಟ್ಟಿಗೆ
ಪಿನ್ನು ಸಿಕ್ಕಿಸಿ ಬಾಯಿ ತೆರಕೊಂಡ ಪ್ಯಾಂಟು ಹೊದ್ದವನ
ಓರೆಗಣ್ಣ ಸಂದೇಶಕ್ಕೆ
ಮುಂಗುರುಳ ಹಿಂದಕ್ಕೆಳೆದು ಬಡಿದಪ್ಪಿತು ಮ್ಉನ,
ಬೆವರ ವಾಸನೆಗೇ ಹಂಬಲಿಸಿತೇ ಮನ.


ಉಗ್ರ ಸೂರಿಯನ ಹುಟ್ಟಡಗಿಸಿದ್ದ ಮೇಘದಲಿ,
ಅಂಗಳದಲೆಲ್ಲ ಚಿಕ್ಕ ರಿಂಗೆಬ್ಬಿಸುವ ಜಡಿ ಮಳೆಯ ರ್‌ಯಾಲಿ,
ಎಳೆನಿಂಬೆಯೊಂದು ತಿಳಿಬಿಳಿಯ ಟಾಪಿನಲಿ ನೆಂದು ಒದ್ದೆಯಾದರೆ,
ನೆರೆ ಹೈದನೊಬ್ಬ ಇವಳ ನೆನೆದು ಒದ್ದೆಯಾಗುವನು.


 ನಾಕಕ್ಷರ ತಿಳಿಯದ ಗೆಳೆಯನ
ಗೆಳತಿಗೆ ಟಪಾಲು ರವಾನಿಸಿ
ಗಟ್ಟಿಗೊಳಿಸಿದ್ದ ಪ್ರೇಮ ಮೂರನೆಯವನ ಪಾಲಾಗಲು ಬಿಡದವನ ಅಂಗಳದಿ ಸದ್ದು ಮಾಡದ ಹೊಗೆ ತೆಳ್ಳಗೆ ತಲೆಯಾಡಿಸಿ ತೂರಾಡಲತ್ತಿತ್ತು.


 ವೃಥಾ ಗೀಚಿದ ನಾಕು ಸಾಲಿನ
ಪದ್ಯದೊಳಗವಳು ತನ್ನ ಇರುವಿಗೆ ದುರ್ಬೀನು ಹಾಕುತ್ತ,
ಲೈಕು ಅನ್‌ಲೈಕುಗಳ ಜೊತೆಗೆ ಆಟವಾಡುತ್ತಾಳೆ ತರುಣಿ.




ವಿನಾಕಾರಣ ಮಾತನಾಡದ ಅರೆವಯಸ್ಸಿನ
ಅದ್ಮಿಯೊಬ್ಬ ಕೆಮ್ಮುವಾಗ ಎದುರಿನವನ
ಮುಖಾರವಿಂದಕೆ ಜೊಲ್ಲು ಚಿಮ್ಮಿಸಿ
ಒಳಗೆ ಹದಿನಾರುಸಾವಿರ ತಪ್ಪೊಪ್ಪಿಕೊಂಡ,
ಸರಿಯಾಗಿ ನೂರೆಂಭತ್ತು ಡಿಗ್ರಿ ಕೋನದಲಿ ನಿಂತವಗೆ
ಪ್ಯಾಂಟೊಳಗಿಂದ ಕರ್ಚೀಪು ತೆಗೆದು
ಮರಳಿ ಮುಖವರಳಿಸುವಲ್ಲಿ ಅವಿರತ ಪ್ರಯತ್ನ.


 ಹರಿದ ಚೆಡ್ಡಿ ತೊಡುತ್ತಿದ್ದ ನನ್ನ
ಸಾರ್ವಕಾಲಿಕ ಕುಚೋದ್ಯದ ಗೆಳೆಯನ
ಬಿಳಿಯ ಪಂಚೆಗೆ ಸೆರಗು ಗಂಟಿಕ್ಕಿಸಿಕೊಂಡ
ಅವಳ ನೆನೆದಾಗಲೆಲ್ಲ
ಕಣ್ರೆಪ್ಪೆ ಅಗಲಿಸಿ ಕ್ರುತಕ ಕನ್ನೀರು ಕೆಡವುವ
ನಾನು ಅನಿರ್ಧಿಸ್ಟಾವಧಿಯವರೆಗೂ ಪ್ರೇಮಿ.


 ಆರೇಳು ಮಾಸಗಳಿಂದ
ಹಲ್ಲುಜ್ಜದ ಇವನಿಗೆ
ಎರಡೂ ತುಟಿಗಳು ಶ್ರೀ ರಕ್ಸೆ,
ಆಕಳಿಸಿದಾಗ ಮಾತ್ರವೇ ಅವುಗಳಿಂದ
ಹೊಮ್ಮುವ ಘಮ ಲೋಕಾರ್ಪಣೆ.



ಹದಿನೆಂಟರ ಇರುಳಿನಲಿ
ನವ ಯುವ ಜೋಡಿಯೊಂದು
ಹತ್ತಡಿ ದೂರದಿಂದ ಓಡಿಬಂದು
ಕೊಳೆಯಿರದ ಪ್ರೇಮ ನಮ್ಮದೆಂದು
ಅಂಟಿಕೊಳ್ಳಲು ಅಲ್ಲಿ ಇನ್ನಿಲ್ಲದ ನೀರವತೆ,
ಸ್ರವಿದ ಬೆವರ ಹನಿಯೊಂದು
ಧೊಪ್ಪನೆ ಕೆಳಗುರುಳಲು
ಬೆಚ್ಚುವರು ಈ ತುಂಡು ಹಯ್ಕಳ ಹೆತ್ತವರು.


 ಇಳಿಸಂಜೆ ಕಳೆವವರೆಗೂ
ಕರಕಿಯ ತಬ್ಬಿ ಮುಲುಗುತ್ತಿದ್ದ ಬಿಳಿಯ
ಮೂಡಣದ ಮನೆ ಕಡೆಗೆ ಮೆಲ್ಲನೆಜ್ಜೆ ಇಟ್ಟ,
ಕರಕಿಯ ಮನೆ ಪಡುವಣಕ್ಕಿತ್ತು
ಅಂದೂ ಕೂಡ ಕತ್ತಲು ಕವಿಯಲಿತ್ತು.


 ಟಾರೋಡಿನಲಿ ನೀನಿಟ್ಟ
ಹೆಜ್ಜೆಗುರುತುಗಳ ಹುಡುಕುವ
ತವಕದಲಿ,
ಮರೆತೆ ನಾ ನಡೆದು ಬಂದ ಕವಲುದಾರಿಗಳ,
ಹಲ್ಲುಬಿಟ್ಟು ಸಂಪೂರ್ಣ ನಗುವ
ನಿನ್ನ ಕಂಡೂ ಕಂಡೂ,
ಈಗೀಗಷ್ಟೇ ಫಳಫಳಗುಟ್ಟುತಿವೆ ನನ್ನ ಓರೆ ಕೋರೆಗಳು.



ಇರುಳ ಪಾತ್ರದಲಿ,
ಅಂತಸ್ತುಗಳ ಮೆಟ್ಟಿಲೇರಿ
ಕುಳಿತವಳ ಕಣ್ಣು ಚಂದಿರನ ಕಲೆಯ ದಿಟ್ಟಿಸುತ್ತಿತ್ತು,
ಕಳೆದ ದಿನ ನಲ್ಲ
ಕೆನ್ನೆ ಕಚ್ಚಿ ಗಾಯ ಮಾಡಿದ್ದ.


 ಗೆಳತಿ ನೀ ಆಮ್ಲಜನಕ
ಕೊನೆವರೆಗೂ ನಾನುಳಿವೆ,
ನಾ ಸಿಗರೇಟಿನೊಗೆ
ಮರುಕ್ಷಣವೆ ನೀ ಕೆಮ್ಮುವೆ.



ಕೇದಗೆಯಲಿ
ಕೆಂದಾವರೆಯಲಿ
ಕೆಂಡಸಂಪಿಗೆಯಲಿ
ಕೆಂಗುಲಾಬಿಯಲಿ
ಇಲ್ಲದ್ದು ಏನಿದೆ ಗೆಳತಿ ನಿನ್ನಲ್ಲಿ
ಇಷ್ಟೊಂದು ಭ್ರಮಿಸುವೆಯಲ್ಲ,
ಉಳಿಯಬೇಡವೇ ನಾನು.


 
ಹಲ್ಲುಬ್ಬು.......!!!!
ನೀ ನಕ್ಕರೂ
ನಗದಿದ್ದರೂ
ಹಲ್ಲು
ಕಾಣುವವು.


ರಾತ್ರಿ ಪಾಳಿ ಅಬ್ಬರದಿ
ಮೆಸಿನ್ನು ಸದ್ದಿಗೆ
ಎಚ್ಚರಗೊಳ್ಳುವಾಗ
ನನ್ನೆದೆ ಹಿರೋಶಿಮಾ ನಾಗಸಾಕಿ,


ಸೊಡರು ಬೆಳಕಿನೊಳಿವಳ ನಿದಿರೆಯೇ ಚಂದವು,
ತುಟಿಗಳೆಡೆಯಿಂದ ಸೋರಿ ಜೊಲ್ಲು ನನ್ನ ಕರೆದು,
ನಾನದರ ರುಚಿಯ ತಿಳಿವ ಬಯಕೆಯು.


ನಿನ್ನ ನೀಳ ಬೆನ್ನಿನಲ್ಲಿಯ
ಮಚ್ಚೆಗೂ,
ಕಳೆದ ಜನ್ಮಕೂ ತಾಳೆಯಾಗದಿರಬಹುದು,
ಆದರೆ,
ನಿನ್ನ ಓರೆ ನೋಟಕ್ಕೂ
ನನ್ನ ಸುಳ್ಳು ವಾದಕ್ಕೂ ತಾಳೆಯಿದೆ.


   ಕುಡಿ ಮೀಸೆಯವನೇ
ಥೇಟ್‌ ನನ್ನಂತೆಯೇ
ಸೂಟುಬೂಟು ಏರಿಸಿದವನು,
ಪುಡಿಗಾಸು ಒಲ್ಲೆಯೆಂದು
ಕೊರಳ ಬಿಗಿದು
ನಿಲ್ಲದ ರಾತ್ರಿಗಳಲಿ
ತೀಟೆ ತೀರಿಸಿಕೊಳಲು
ನನ್ನವಳೇ ಆಗಬೇಕಿತ್ತೇ.


ಹಾದಿಯಲಿ ಅಡ್ಡ ಸಿಕ್ಕವರಿಗೆಲ್ಲ ಹಲ್ಲು ಕಿರಿಯುವ
ನನಗೆ, ತಿರುವಿನಲಿ ವಾಲಾಡಿ ಎದುರು ಬೈಕು ಸವಾರನ ಕಂಗೆಡಿಸುವ ಚಾಳಿಯಿದೆ,
ಹೇಗೆಲ್ಲಾ ನಾ ಕಳಪೆ ಎನಿಸಿಕೊಂಡರೂ
ನಿನ್ನ ಕಾರಣ ಕೊಟ್ಟು ಬಚಾವಾಗುವೆ,
ಜೋರು ನಿದ್ದೆಯಲಿ ಜೊಲ್ಲು ಸುರಿಸಿ
ಬೆಳ್ಳಂಬೆಳಗ್ಗೆ ಕನ್ನಡಿ ಮುಂದೆ ನಿಂತು ಒರೆಸುವಾಗ ನೀನೆ ಮುತ್ತಿಕ್ಕುವೆ.


ಬೆತ್ತಲು ನಾ
ಬೆತ್ತಲಾಗದಿರುವವರೆದುರು
ಕತ್ತಲು,
ಬೆಳಕಲ್ಲಿ ಬೆತ್ತಲಾದೆ
ಕತ್ತಲಲ್ಲೂ ಬೆತ್ತಲಾದೆ,
ಕಂಡಿಲ್ಲ ಅಷ್ಟೆ,
ಬೆಳಕಲ್ಲೂ ಬೆತ್ತಲಾಗದ
ನಿಮಗೆ ಕಂಡೀತು ಹೇಗೆ ನನ್ನ ನಿಷ್ಟೆ.


  ನಾನೂ ನಿಮ್ಮಂತೆ
ಅಳುವೆನು, ಹಲ್ಲೂ ಕಿರಿವೆನು.
ಅಮಲಿನಲಿ ನನ್ನವಳು ಬೇಸರಿಸಿಕೊಂಡರೆ,
ಕೆನ್ನೆ ಕಚ್ಚಿ ಸಮಾಧಾನಿಸುವೆನು.
ಹೊಟ್ಟೆ ಉರಿಯೇ ನಿಮಗೆ.......!?



ನನ್ನ ಜೋಡಿ ಜೋಡುಗಳು
ಹೊಸ್ತಿಲಾಚೆಯೇ ಉಳಿವವು,
ಕೊಡುವ ಘಾಸಿಗೂ ನೋಯವು, ಅಳವು,
ಚರ್ಮ ಕಿತ್ತಿದೆ ಅವುಗಳಿಗೆ
ಒಂದೆರಡು ಹೊಲಿಗೆಗಳಿವೆ,
ಮನೆಗೆ ವಾಪಸಾದಾಗ ಮಡಿಯಾಗುತ್ತವೆ,
ನನಗೆ ಮಾತ್ರ ಗೊತ್ತಿದೆ ಅವೂ ಕೆಮ್ಮುತ್ತವೆ.


 ದಿನಗಳು ಚಲಿಸುತ್ತವೆ,
ಹಿಂದಕ್ಕೂ ಮುಂದಕ್ಕೂ,
ನಾ ನಿನ್ನೆ ಉಂಡದ್ದು ನಾಳೆಗೆ ವಿಸರ್ಜಿಸುವುದು ಘಮವಿಲ್ಲ ಅವುಗಳಲ್ಲಿ, ನಿನ್ನೆ ನಾಳೆಗಳಲ್ಲಿ.
ಇಂದಿನ ಮೊಗ್ಗು ನಾಳೆ ಅರಳಿದರೂ.


ನನ್ನೆದೆಗೆ ಬೆಂಕಿ ಇಟ್ಟು
ನೀ ಮೈ ಕಾಯಿಸುವಾಗ
ಹಿತವೆನಿಸುತ್ತದೆ,
ಅಂಗಾತ ಮಲಗಿ ಅಳುತ್ತೇನೆ.


ಇಳಿಸಂಜೆಯಲಿ ಬೇಯಲು
ಬಿಸಿ ಕಾಪಿಯೇ ಬೇಕಿಲ್ಲ,
ಬಳಿ ಸುಳಿದರೆ ಸಾಕು
ನೀ ವೇಲು ಬೀಸಿಕೊಂಡು
ಕಣ್ಣುಬ್ಬೆಬ್ಬಿಸಿಕೊಂಡು.


  ಪ್ರತಿ ಕಟಕಟೆಯೂ ಕತೆಯ ಹೇಳುವುದು,
ನೊಂದವರದ್ದು,
ಕೊಂದವರದ್ದು,
ಸೆರೆಯೊಳಗೆ ಬೆಂದವರದ್ದು.


 
ಬರೆಯಲೇ ಬೇಕೀಗೊಂದೆರಡು ಸಾಲು,
ಈಕೆ ಎಲೆ ಅಡಿಕೆ ಜಗಿದು
ತುಟಿಯ ಬಳಿ ಬೆರಳಿಟ್ಟು
ಚಿಮ್ಮಿಸಿದ ದ್ರವ್ಯ ಯಾವ ಬಣ್ಣದ್ದೆಂದು,
ಲೋಕ ಮರೆತಂತೆ
ಎಡವಿ ಬಿದ್ದಾಗ ತಡೆಯಬಂದ ಕಲ್ಲಿನ ವಯಸ್ಸೇನೆಂದು,
ಯಾಕೀಗೆ ಎನ್ನುತ್ತಲೇ ತಿರುಗಿ ಕಣ್ಣೆತ್ತುವೆನವಳ ಕೆಂಪು ಹಲ್ಲು ಕಂಡೀತೆಂದು.


ಉಗಾದಿಯೋ ಯುಗಾದಿಯೋ ವಿಮರ್ಶೆ ಬೇಡ,
ಅವ್ವ ಕೊಟ್ಟ ಹೂರಣದ ಉಂಡೆ ಮೆಲ್ಲುವಾಗ,
ಗೆಳೆಯನ ಹಟಕ್ಕೆ ಮುಂಜಾವೇ ಬಾರು ದರ್ಶನ,
ನೈಂಟಿ ನೈಂಟಿ ಎನ್ನುತ್ತಲೇ
ಲೀಟರುಗಟ್ಟಲೆ ಸುರಪಾನ,
ಪಡಸಾಲೆಗಳ ಮೇಲೆ ಇಸ್ಪೀಟು ಸಭೆ,
ಗೆದ್ದವ ಕಾಗೆ, ಸೋತವ ಗೂಬೆ,
ಕರೆದು ತುಟಿಯೊತ್ತುವಳ ಉದ್ಗಾರ 'ಏನಿದು ವಾಸನೆ',


 ಉರಿವ ಬಿಸಿಲೇ ಜಟ್ಟಿ,
ನೆರಳೀಗ ಬಲು ತುಟ್ಟಿ
ಅಲ್ಲವೆಂದರೆ ಸಿಟ್ಟು,
ಉರುಳುವೆ ಇಲ್ಲೆ
ಹೊಂಗೆ ನೆರಳಿಗಂಟಿ.


ಹೌದಿದು ಯುಗಾದಿ
ಕಂಠ ಪೂರ್ತಿ ಕುಡಿದು ಮಬ್ಬಾಗಲು ಸುಲಭದ ಹಾದಿ,
ಅಪ್ಪ ಮುಂಜಾನೆದ್ದು ತರುವ ತಳಿರು ತೋರಣ,
ಅವ್ವ ಒಲೆ ಮುಂದೆ ಬೆಂದು
ಹದಕ್ಕೆ ತಂದ ಹೂರಣ,
ಅಣ್ಣನಿಗೊಪ್ಪದ ಎಣ್ಣೆ ಸ್ನಾನ,
ನನ್ನದೋ ಊರ ಒಳಗೆ
ಹೊಸ ಹಸಿರು ದಾವಣಿಯುಟ್ಟವಳೆಡೆಗೇ ಗಮನ.


 ಗೆಳತಿ ಉರಿವ ದೀಪವಾರಿ ಕಪ್ಪು ಕತ್ತಲಾದರೆ ಹೊಣೆ ನೀನೆ,
ಅಕಸ್ಮಾತ್‌ ನನ್ನ ಕೊಳೆ ಹೊನ್ನ ಮೈಗಂಟಿದರೆ ಅದಕೆ ನಾನೆ.


ಕಾಣುವುದೆ ತಡ ಅವಳಿಗೆ ಕಣ್ರೆಪ್ಪೆ ಕುಣಿಸುವಳು,
ಬಳಿಸುಳಿದು ಡಿಚ್ಚಿ ಕೊಡುವಾಗವಳ ಮೂಗಿನ ಬೆವರು ಸೋಕಿ
ತಣ್ಣಗಾಗುವೆನು,
ಗೇಲಿಯಲಿ ಚಿವುಟಿದವಳ ಉಗುರು ಮುರಿದು ನನ್ನ ಪಾಕೆಟ್ಟು ಸೇರಿದೆ,
ಅದೆಷ್ಟೋ ಬಾರಿ ಅದರಿಂದ ಕೊಳೆ ತೆಗೆದಿದ್ದದ್ದು ನಾನೇ,ಆಗೆಲ್ಲ
ಅವಳ ಕೋರೆಹಲ್ಲು ನನ್ನ ಕದ್ದು ನೋಡುತ್ತಿತ್ತು,


ಕತ್ತಲೊಳಗಿನ ಬೆತ್ತಲು ನನ್ನವಳು
ನಾಚಿಕೆಯ ಹೆಣ್ಣಿವಳು
ಮೂಗುತಿಗು ಕಲಿಸಿಹಳು,
ಕತ್ತಲೊಳಗಿನ ಬೆಳಕಿವಳ ಮೊಗ
ತುಟಿ ಬಿರಿದಾಗವಳು ನಾ ಮೂಗ,
ನೀಟು ಕ್ರಾಪಿನೊಳಗೆ ದೇವತೆ
ಬೆರಗುಗಣ್ಣು ಬೆಳಕ ಚೆಲ್ಲಿತೆ,
ಕತ್ತಲೊಳಿತ್ತ ದಿಟ್ಟಿಸುತಿರುವಳು
ಮನವನೆಲ್ಲ ಮುಖಕೆ ಮೆತ್ತುವಳು.


 ಧಗೆಯ ಕಾಲದೇ ಮೇಲ್ಗುಂಡಿ ಕಳೆದು ಕೇಡಿ ನಾ,
ನಡುಗಿಸುವ ಚಳಿಗೆ ಮುದುಡಿ ಸಣಕಲ,
ಬೀಸುಗಾಳಿ ಕಾಲದಲಿ ತಲೆ ಕೆದರಿದಾ ಪುಂಡ,
ಮಳೆಗಾಲಕೆ ಅಡಗಾಡುವ ಛತ್ರಿ.


 ಗೆಳತಿ
ಹೊಂಡ ದಾಟುವುದು ಮಜವೆನಿಸುತಿದೆ,
ನೀ ನಕ್ಕಾಗಿಂದ
ನನ್ನ ಬೈಕು ಹೊಂಡದೊಳಗೆ ಇಳಿಯುತಿದೆ,
ಮಳೆ ನೀರು ಹೊರಗಾರಿ ನಾ ತಪ್ಪಿಸಿಕೊಳ್ಳುವಾಗ ಚಿನ್ನಾಟವೆನಿಸುತಿದೆ.
 

ಹಾಸಿ ಹೊದ್ದಿದೆ ನೆರಳು
ಉರಿವ ಬಿಸಿಲಿನ ಅಡಿಗೂ,
ಬಲಿತ ಮರಗಳ ಹೊದಿಕೆ
ಸುಡುವ ಧರೆಯ ಮೈಗೆ,
ಕಾಯುವುದೆ ಕಾಯಕ
ನನ್ನವ್ವಗೆ ಮಳೆಗೆ ಬಿಸಿಲಿಗೆ ಕಾದು ಕೆಂಪಾದವಳಿಗೆ ಮಳೆ ಹೊಯ್ಯೆ ನಾಚಿಕೆ.








 
 
 
......ರಾಶೇಕ್ರ

2 comments:

  1. ನೀಳ್ಗವಿತೆ ಅಥವಾ ಕಿರುಗವಿತೆಗಳ ಗುಚ್ಛ ಹಲವು ಮಜಲುಗಳನ್ನು ಅನ್ವೇಷಿಸುತ್ತಾ ಸಾಗಿ ಹೋಗುತ್ತದೆ.

    ಕಾಯುವ ಪರಿ "ಇಂದಿನ ಮೊಗ್ಗು ನಾಳೆ ಅರಳಿದರೂ"
    ಹಳ್ಳಿಗಾಡ ನೆನಪು "ಹೊಂಗೆ ನೆರಳಿಗಂಟಿ"
    ಅಬ್ಬಾ "ನೀಟು ಕ್ರಾಪಿನೊಳಗೆ ದೇವತೆ"

    ಒಟ್ಟಾರೆ ಚೆನ್ನಾಗಿದೆ.

    http://www.badari-poems.blogspot.in

    ReplyDelete
  2. ಚೆನ್ನಾಗಿದೆ ..
    ಇಷ್ಟವಾಯ್ತು
    ಮುಂದುವರೆಸಿ

    ReplyDelete