Monday 29 July 2013

ಹೊಸತು ಕಾವ್ಯ

ಬರೆವೆ ನೋಡಿ ಹೊಸತು ಕಾವ್ಯ
ಹೊಸತು ಅಥವಾ ಪೂರ ಹಳತು
ತಾಳೆಗರಿಯ ಮುಖದ ಮೇಲೆ
ನವಿಲುಗರಿಯ ತಿಕವನಿಟ್ಟು
ಕಪ್ಪು ಮಸಿಯ ಬಣ್ಣ ಬಳಿದು
ಓದದವರು ಓದಿಕೊಳ್ಳಿ,

ಪೂರ್ತಿ ಕೆಟ್ಟ ರೋಡಿನಾಚೆ
ಯಾರೊ ಕಾಣೆ ಟಾರ ಬಳಿದು
ಹಸನು ಮಾಡಿ ಕೊಟ್ಟಿದಾರೆ
ನಡೆವೆನೀಗ ಅದರ ಕಡೆಗೆ
ತಿರುಗಿ ಬಂದರೇನು ತಪ್ಪು
ಕೆಳಗೆ ಇಳಿದರೂನು ಒಪ್ಪು
ಬಣ್ಣ ಬಳಿಯಲೆಂದೆ ಹತ್ತಿ,

ಯಾರು ಇರದ ರಾತ್ರಿಯಲ್ಲಿ
ಬೆಳಕು ಹುಡುಕೊ ಬೆರಕೆಯಂತೆ
ಅದೇ ಗೂಬೆ ಕೊಂಬೆ ಮೇಲೆ
ಗೂಕ್ ಗೂಕ್ ಸದ್ದು ಮಾಡಿ
ಬಾವಲಿಗಳ ಬೆನ್ನು ಹತ್ತಿ
ತಿರುಗಿ ಮರಕೆ ತಿಕವನೊತ್ತಿ
ಕುಂತಿತಗೋ ಎತ್ತು ನೆತ್ತಿ,

ಬೆಳಕಿನಲ್ಲಿ ಬೇಡ ಬಿಡಿ
ಅಲ್ಲಿರುವ ನಾನೂ ಕೇಡಿ
ಸ್ವಾರ್ಥ ನನ್ನ ಬಿಗಿದ ಬೇಡಿ
ಅರೇ, ಮೆದುಳು ಗ್ಯಾಪು ತೆಗೆದುಕೊಂಡು
ಪ್ರಾಸವನ್ನ ಮರೆಸಿ ಹೋಯ್ತು
ಸ್ವಾರ್ಥಕೆಷ್ಟು ಶಕ್ತಿ ನೋಡಿ
ಅಲ್ಲಿ ಅರೇ ಬಿಟ್ಟು ಓದಿಕೊಳಿರಿ,

ನಾನು ನಾನು ಜಾಸ್ತಿಯಾಯ್ತು
ನೀನು ಬಾರೆ ಇದರ ಒಳಗೆ
ಎಲ್ಲಿ ಕುಳಿತೆ ಯಾರ ಎದೆಗೆ
ನನ್ನ ಎದೆಗೆ ಚಾಕನೆಸೆದು
ಎಲುಬಿನೊಳಗೆ ಆಳಕಿಳಿಸಿ
ಹೃದಯವನ್ನೆ ತೂತು ಮಾಡಿ
ನೀನು ಸಣ್ಣ ನಗೆಯ ಬೀರಿ
ಎದೆಗೆ, ಎದೆಗೆ ಅನ್ನುವಾಗ ಸ್ವಲ್ಪ ಗೊಂದಲಮತ್ತು ತಪ್ಪಾಗಲು ಕಾರಣವಾಗಿಬಿಟ್ಟೆ.

ರಾಶೇಕ್ರ

No comments:

Post a Comment