Friday 2 August 2013

ಹಾಗೇ ಹೀಗೆ

ಎದೆ ಭುಜದ ಮೇಲೊರಗಿ
ಬಿಸಿಯುಸಿರ ಬಳ್ಳಗಟ್ಟಲೇ
ಮೊಗೆಮೊಗೆದು ಕುಡಿಸುವಾಗ
ಶಾಂತರೀತಿಯ ನನ್ನ ನಿಮಿರು ಕ್ರಿಯೆಗೆ ಎಳ್ಳು ನೀರಿನ ತರ್ಪಣ.
==============================
ಎದೆ ಭಾರವಾಗುತಿದೆ ನೀನೆ
ಇರು ಇಲ್ಲಿ, ತೂಕಡಿಸು, ಪವಡಿಸು ನನ್ನ ತೊಡೆಯ ಮೇಲೊಂದಿಷ್ಟು ಹೊತ್ತು
ಹಗುರಾಗಿ ತೃಣವಾಗುದುರುವ ನಾನೆಲೆಯಾದರೇನಂತೆ ಒಟ್ಟಿನಲಿ ನೀನಿರು.
====================================
ನಾನು ಸಾವು
ನಿನಗೆ ಜೀವನ್ಮುಕುತಿ
ನಡಿ ನನ್ನೆಡೆಗೆ ಒಂದಿಷ್ಟು ಸುಖವನುಣ್ಣು
ಬಾ ಇಲ್ಲೊಂದಷ್ಟು ಹೊತ್ತು ಕೂತು ಜೋಂಪಿನ ರಾಜ್ಯವಾಳು
ಬಾ ನೀನೇ ರಾಜ ರಾಣಿಯಿರದ, ಗೌರವದ ಹಂಗು ತೊರೆದ ಮುಕ್ತವಾಗು ಬಾ.
====================================
ನಾನು ನರ
ಹಗುರೆಲುಬಿನಂದರ
ಒಳಗೆ ಬುಳಬುಳನೆ ಹರಿವ
ರಕುತದಲಿ ದೇವರಿದ್ದಾನೆಂಬ ಭ್ರಾಂತಿ,

ನಾನು ಮರ
ನಾಕೈದು ಹಕ್ಕಿಪಿಕ್ಕಿಗಳಿಗೆಂದೆ ನೆಲೆ
ತಾಯೊಡಲ ಜೀವಮಾನ ಹೀರಿ ಸತ್ತ ಧನ್ಯತೆ,

ನಾನು ನೀರು
ಕೊಳೆ ತೊಳೆದು ಇಕ್ಕೆಲಗಳಲೆಲ್ಲ ಹೊಕ್ಕಿ
ತಟಸ್ಥದೆಡೆಗೆ ತವಕದ ಹರಿದಾಟದ ನೋವು ನಾನು.
=========================
ಗೆಳೆಯ ನೀನು
ಎದೆಬೆವರ ಕಮಟು ವಾಸನೆಯ
ನವಿರು ಘಮಲೆಂಬ ತಪ್ಪು ಕಾವ್ಯ.

ರಾಶೇಕ್ರ

No comments:

Post a Comment