Wednesday 14 August 2013

ಗಜಲ್ 10

ಗಜಲ್ 10

ಬಿಳಿಯ ಖಾಲಿ ಹಾಳೆಯೊಳಿನ ಕೊಳಕು ಭಾಷೆಯಲ್ಲ ಹಾಡು
ದಿನಗಟ್ಟಲೆ ಹುಡುಕಿ ಬರೆದ ಕಠಿಣ ಪದಗಳಲ್ಲ ಹಾಡು

ಪುರ್ರಂತ ಹಾರಿ ಬಂದು ಚಿಗುರಿದೆಲೆಯ ಪ್ರಾಣ ಕಂಡು
ಕತ್ತನೆತ್ತಿ ಕೆಮ್ಮಿದರೂ ಅಲ್ಲಿ ಹುಟ್ಟಲಿಲ್ಲ ಹಾಡು

ಎಳೆ ಪೈರಿನ ಮೇಲೆ ಬಿದ್ದ ಬೆಳಗ ನೀರ ಹನಿಯ ಮೇಲೆ
ಸೂರ್ಯರಶ್ಮಿ ಕಣ್ಣು ತೆರೆದರಲ್ಲಿ ಸುಳಿಯಲಿಲ್ಲ ಹಾಡು

ದೇಹ ವೀಣೆ ತಂತಿ ಎಲುಬು ಸತತ ಅದನೆ ಮೀಟಿ ಮೀಟಿ
ಎಷ್ಟು ಹೊತ್ತು ಕಾದರೂನು ಸುಲಭಕೊದಗಲಿಲ್ಲ ಹಾಡು

ಅಲಂಕಾರ ದುಷ್ಟಾಂತ ಛಂದಸ್ಸುಗಳನೆಳೆಮಾಡಿ
ಎಳೆಎಳೆಯಾಗೆಳೆದರೂನು ಯಾಕೊ ಬರಲೆ ಇಲ್ಲ ಹಾಡು

ಮಳೆಯಮೋಡ ಬೀಸುಗಾಳಿ ಋತುಮಾನಕೆ ಪಕ್ವವಾಗಿ
ಕಾಲಕಾಲಕೊದಗಿ ರೈತ ಬೆಳೆದ ಬೆಳೆಯಲಿಲ್ಲ ಹಾಡು

ಪ್ರಾಣ ಕೊಂದು ಚರ್ಮಸುಲಿದು ಸೂಜಿದಾರದಿಂದ ಹೊಲಿದು
ತಮಟೆ ಮಾಡಿ ಟಪಟಪನೆ ಹೊಡೆದ ಹೊಡೆತವಲ್ಲ ಹಾಡು

ನಾನು ನರನು ನೀನು ಪ್ರಾಣಿ ಎನುತ ಒಣದ ಜಂಬದಲ್ಲಿ
ಪಾಪದಿಲಿಯ ಕೊಂದು ತಿಂದ ಹಲ್ಲಿನೊಳಗೆ ಸಲ್ಲ ಹಾಡು

ಕತ್ತಲಲ್ಲಿ ದೇಹ ಬೆಸೆದು ಬೆವರ ಹರಿಸಲಿಲ್ಲ ಹಾಡು
ಗರ್ಭದೊಳಗೆ ಅಂಟು ಮೊಳೆತು ಭ್ರೂಣವಾದರಲ್ಲ ಹಾಡು

ಕೆಂಪು ಕಣ್ಣ ಕೋಗಿಲೆಗಳು ಮಾಮರದ ತುದಿಗೆ ಕೂತು
ಪೈಪೋಟಿಯನ್ನೊಡ್ಡಿಕೊಂಡು ಕೂಗೊ ಕೂಗಲಿಲ್ಲ ಹಾಡು

ಎದೆನಡುಕ ತುಟಿಯ ನಡುಕ ಕಂಡುಕೊಂಡ ಫಕೀರನಿಗೆ
ದೇಹ ನೀಡಿ ಪಡೆದು ಬಸಿರ ಉಸಿರನೆಳೆದರಲ್ಲ ಹಾಡು

ಈಚೀಚೆಗೆ ಹೆರಿಗೆಯಾಗಿ ಬಿಸಿಲ ಕಂಡ ಎಳೆಯ ಮಗುವ
ಮೊಲೆಯ ಚೀಪಿ ಹಾಲುಕುಡಿದ ತುಟಿಯ ಮೃದುವಲಿಲ್ಲ ಹಾಡು

ಗಂಟಲೊಳಗೆ ನೀರನಿಳಿಸಿ ಗೊಟಗೊಟಾಂತ ಗುಟುಕರಿಸುತ
ಗಂಪು ಕಟ್ಟಿಕೊಂಡು ಕೂತು ಉಸಿರಿದುಸಿರು ಅಲ್ಲ ಹಾಡು

ವಿರಹ ತಣಿಸಲೆಂದು ಬಂದ ಇನಿಯನೊಳಗೆ ಇರದ ಸಲಿಗೆ
ಇರುವುದೆಂದೆ ಎಳೆದು ಎಳೆದು ತಬ್ಬಿಕೊಂಡರಲ್ಲ ಹಾಡು

ನೀಲಿ ಬಾನ ಮೋಡವೊಂದು ಭೂಮಿಯತ್ತ ದೃಷ್ಟಿನೆಟ್ಟು
ಬುಳಬುಳಾಂತ ಹರಿದರಲ್ಲಿ ಮೊಳಕೆಯೊಡೆಯಲಿಲ್ಲ ಹಾಡು

ಎಲುಬಿನೂರ ಹೇ'ರಾಜ' ಅಂದವಿರದ ಸಖಿಯ ಕರೆದು
ಎಳೆದೆಳೆದು ಮುತ್ತನಿಟ್ಟ ಖಾಲಿ ಎದೆಯಲಿಲ್ಲ ಹಾಡು

ರಾಶೇಕ್ರ

No comments:

Post a Comment