Thursday 8 August 2013

ಗಜಲ್ 4

ಗಜಲ್-4

ಸುಯ್ಯನೆ ಗಾಳಿಯಲಿ ಹಾದಿ ಬದಿ ಮರಗಳಡಿ ಸಾಗುತಿಹೆನಲ್ಲ ಯಾಕೊ ಕಾಣೆ
ಬರಿಗಾಲ ಬೊಬ್ಬೆಗಳು ಪಣಪಣನೆ ಜುಮ್ಗುಟ್ಟಿ ನೋವುತಿಹುದಲ್ಲ ಯಾಕೊ ಕಾಣೆ,

ಸಂಸಾರ ಸಾಕಾಗಿ ಸಿಹಿಯೆಲ್ಲ ಹುಳಿಯಾಗಿ ಹರೆಯಕೀಗೆರೆಗಿದೆ ಮುಪ್ಪು
ಕರಿ ಪೂರ ಬಿಳಿಯಾಗಿ ನರೆಗೂದಲೊಟ್ಟಾಗಿ ಗಹಗಹಿಸುತಿಹುದಲ್ಲ ಯಾಕೊ ಕಾಣೆ,

ಗೆಳೆಯರಾ ಸಂಗದಲಿ ಹಿಡಿಯಷ್ಟು ವಿಷವಿತ್ತೆ ಯಾಕಾಗಿ ನಡೆದಿರುವೆ
ಎಲ್ಲರನು ಕರೆದರೂ ಸನಿಹಕಿದ್ದವರೆಲ್ಲ ದೂರಾಗುತಿಹರಲ್ಲ ಯಾಕೊ ಕಾಣೆ,

ಬಿಟ್ಟು ಬಿಡದೀ ಮಾಯೆ ಎತ್ತ ನಡೆದರೂ ಕೂಡ ಮತ್ತೆ ಮತ್ತೆರಗಿ
ಘನನೆಂದುಕೊಂಡಿದ್ದೆ ಅರೆಬಲಿತ ನರರೆಲ್ಲ ತೃಣವೆನ್ನುತಿಹರಲ್ಲ ಯಾಕೊ ಕಾಣೆ,

ಎಲ್ಲ ಕಳೆಯುವಾ ಮಾಯೆ ಸಾವೊಂದೆ ತಿಳಿಯಯ್ಯ ಸುಮ್ಮನೇತಕೆ ಹೀಗೆ
ನಡೆನಡೆದು ಸೋಲುತಿಹೆ ಹೇ 'ರಾಜ' ತಿಳಿ ನೀ ಕೊನೆಮೊದಲು ಇದಕಿಲ್ಲ ಯಾಕೊ ಕಾಣೆ.

ರಾಶೇಕ್ರ

No comments:

Post a Comment