Sunday 11 August 2013

ಗಜಲ್ 6

ಗಜಲ್ 6

ಅವನಾ ಮೂಲೆ ಇವಳೀ ಮೂಲೆ ಹಾಗೇ ತೇರು ಉರುಳುತಲಿತ್ತು
ಅಲ್ಲೊಂದಂಗಡಿ ಇಲ್ಲೊಂದಂಗಡಿ ಹೀಗೇ ತೇರು ಉರುಳುತಲಿತ್ತು

ಆಹಾ ಮಳಿಗೆ ಸಿಹೀ ಮಿಠಾಯಿ ತಿನ್ನಲು ಬಲುರುಚಿ ಅಬ್ಬಬ್ಬಾ
ನಾನೂ ಸುಮ್ಮನೆ ಬಾಯ್ನೀರಿಳಿಸಿದೆ ಬಾಗೇ ತೇರು ಉರುಳುತಲಿತ್ತು

ಬಂದನು ಮಿತ್ರ ಮೆಲ್ಲಗೆ ಹತ್ರ ತುಂಬಾ ದಿನದ ಭೇಟಿಯಿದು
ಕೈಕೈ ಹೆಗಲಿಗೆ ಹಾಗೇ ಏರಿಸೆ ಹೊಂಗೇ ತೇರು ಉರುಳುತಲಿತ್ತು

ಪಿಳಿಪಿಳಿ ದೀಪ ದಾರಿಯ ಉದ್ದಕು ಇಕ್ಕಳ ಸಿಕ್ಕಿಸಿ ಖಾಕೀ ತೊಟ್ಟವ
ಪದೆ ಪದೆ ಅದನೇ ಬೆಂಟುತಲಿದ್ದ ಸೋಗೇ ತೇರು ಉರುಳುತಲಿತ್ತು

ಹದಿನೇಳೊರುಷ ನಿಂತಾ ಜಾತ್ರೆಗೆ ಮೊನ್ನೆ ದಿವಸ ಮುಹೂರ್ತ ಇಟ್ಟೆವು
ಅವಾಗ ನಡೆದ ಚರ್ಚೆಯ ನೆನಪಿಸೆ ಲಗ್ಗೇ ತೇರು ಉರುಳುತಲಿತ್ತು

ಆಹಾ ಸಂಭ್ರಮ ಓಹೋ ಸಡಗರ ಹೋಳಿಗೆ ಊಟಕೆ ಬಿರಿದಿದೆ ಉದರ
ಸ್ಯಾನೇ ವರ್ಷವು ಹೀಗೇ ನಡೆಯಲಿ ಎನ್ನಲು ಗಂಗೇ ತೇರು ಉರುಳುತಲಿತ್ತು

ಸಾವಿರ ಜನರು ಒಮ್ಮೆಲೆ ಸೇರಿ ಸ್ವಗತದ ಪರಿಚಯ ಮಾಡುತಿರೆ
ಹಸಿರುಲಂಗದವಳಿತ್ತಗೆ ತಿರುಗಲು ಅಗೊ ತುಂಗೇ ತೇರು ಉರುಳುತಲಿತ್ತು

ಹೇ 'ರಾಜ' ಇದು ಹಳ್ಳಿಯ ಜಾತ್ರೆಯು ಬಿಸಿಲು ಮಾರವ್ವ ನಮ್ಮನೆ ದ್ಯಾವರು
ಎಂದೂ ಪರಿಚಯ ಮಾಡುತಲಿರಲು ಬಿಸಿಗೇ ತೇರು ಉರುಳುತಲಿತ್ತು.

ರಾಶೇಕ್ರ

No comments:

Post a Comment