Sunday 11 August 2013

ಗಜಲ್ 7

ಗಜಲ್ 7

ಅದೇನೋ ಹೇಳುವ ಆತುರವಿತ್ತು ಮೂಗನಾದೆನೆ ನಿನ್ನೆದುರು
ಎಚ್ಚರದಾಗೇ ಅದ್ಯಾಕೋ ಕಾಣೆ ಕನಸಿಗನಾದೆನೆ ನಿನ್ನೆದುರು

ಮಾತೊಂದಿತ್ತು ಹೇಳುವುದಿತ್ತು ಬಿಗಿ ಉಸಿರಿಡಿದು ಬಂದಿದ್ದೆ
ಹೇಳಲದೇಕೋ ಮನಸೇ ಒಪ್ಪದೆ ಮೌನಿಯಾದೆನೆ ನಿನ್ನೆದುರು

ಸಾವಿರ ದಿನಗಳ ಆಸೆಯ ಮೂಟೆಯ ಹೆಗಲಿಗೇರಿಸಿ ನಿಂತಿದ್ದೆ
ಒಮ್ಮೆಲೆ ನೀನೇ ಎದುರಿಗೆ ಬರಲು ಎಳವನಾದೆನೆ ನಿನ್ನೆದುರು

ಕೋಟಿ ಕನಸುಗಳೊಟ್ಟಿಗೆ ಎರಗಲು ಭ್ರಾಂತನಾಗಿಯೇ ನಿಂತಿದ್ದೆ
ಮಿಂಚಿನ ಹಾಗೆ ನೀ ಸಂಚನು ಹೂಡಲು ಸುಮ್ಮನಾದೆನೆ ನಿನ್ನೆದುರು

ಯಾರದೊ ಮಗಳ ಕಣ್ಣಂಚಿನ ಸುಳಿಗೆ ತರಗೆಲೆಯಂತೆ ಸಿಲುಕಿದೆನು
ಆಳಿನ ಮಗನು ನಾ ಕಿರೀಟವಿರದ 'ರಾಜ'ನಾದೆನೆ ನಿನ್ನೆದುರು

ರಾಶೇಕ್ರ

No comments:

Post a Comment