Sunday 11 August 2013

ಗಜಲ್ 8

ಗಜಲ್ 8

ಏಕಮುಖದ ಮನಸುಗಳನೆ ಇವರು ಪ್ರೀತಿಯೆಂದರಲ್ಲ
ಎರಡು ಹೃದಯ ಬೆರೆತರದನೆ ಚಿಗುರು ಪ್ರೀತಿಯೆಂದರಲ್ಲ

ಹೇಗೋ ಇರುವ ಈರ್ವರೊಳಗೆ ಸೆಳೆತವೊಂದು ಸುಳಿದಮೇಲೆ
ಅಷ್ಟು ದೂರ ನಡೆದರದನೆ ಅವರು ಪ್ರೀತಿಯೆಂದರಲ್ಲ

ಕಾಲದಾಚೆ ಕ್ಷಣಿಕ ಸುಖಕೆ ದೇಹಗಳನು ಹಂಚಿಕೊಳಲು
ಇರುಳ ಬೆಳಕು ಬೆವೆತರದನೆ ಬೆವರು ಪ್ರೀತಿಯೆಂದರಲ್ಲ

ಸಾಕು ಬೇಕು ಸಾವಿನಾಚೆಗೆಲ್ಲ ತೊರೆದು ಪೂರ್ತಿ ಮುಕ್ತ
ದೇಹ ದೇಹ ಕಲೆತರದನೆ ನವಿರು ಪ್ರೀತಿಯೆಂದರಲ್ಲ

ಪ್ರೀತಿ ಪ್ರೇಮವೆಲ್ಲ ಸುಳ್ಳು ನಂಬದಿರು 'ರಾಜ' ನೀನು
ಹೃದಯ ತೆರೆದು ನಕ್ಕರದನೆ ಜನರು ಪ್ರೀತಿಯೆಂದರಲ್ಲ.

ರಾಶೇಕ್ರ

No comments:

Post a Comment