Wednesday 4 September 2013

ಗಜಲ್ 13

ಈ ನನ್ನ ಖಾಲೀ ಎಲುಬಿನೊಳಗವಿತುಕೊಂಡಂತಹ ಹೇ ಹೃದಯ
ನೀ ಮಾತ್ರವೇ ನನ್ನನ್ನು ಬೆಳಕಾಗಿಸಬಲ್ಲೆ ಹೃದಯದಂತಹ ಹೇ ಹೃದಯ

ಈ ಕಾರ್ಗತ್ತಲ ಕಿರುಕೋಣೆಯ ಒಂದೇ ಕಿಟಕಿಯ ತೆರೆದು
ಚೂರು ಕಿರಣಗಳನ್ನೊಳಗಿಳಿಸಬಲ್ಲ ಹೊಳೆವಂತಹ ಹೇ ಹೃದಯ

ಈ ಬೆಂಗಾಡು ಊರ ಜನಗಳೊಳಗಿಂದ ನನ್ನನ್ನು ಹೆಕ್ಕಿ
ಎಳೆದು ಹೊರಗೆಡವಬಲ್ಲೆ ನೀನು ಮಾತ್ರ ಚಿನ್ನದಂತಹ ಹೇ ಹೃದಯ

ಖಾಲಿ ಎದೆ ಜನರುಗಳ ನಡುವೆ ನನ್ನನ್ನೊಂದು ಪುಟ್ಟ
ಪ್ರಖರವಾದ ಚುಕ್ಕಿಯಾಗಿಸಬಲ್ಲೆ ನನ್ನ ಹೊರಗೆಳೆವಂತಹ ಹೇ ಹೃದಯ

ಯಾವ ರಾಜ್ಯವನ್ನಾಳದ ದೇಶಕೋಶಗಳನ್ನೇನೂ ಗೆಲ್ಲದ
ಈ 'ರಾಜ'ನ ಗೆದ್ದುಬಿಟ್ಟೆಯಲ್ಲ ನನ್ನನ್ನಾಳಬಲ್ಲಂತಹ ಹೇ ಹೃದಯ

No comments:

Post a Comment